ಷಡಾಕ್ಷರಪ್ಪ, ಹೆಚ್ ಎನ್
(1936- ). ದಾವಣಗೆರೆ ಸಮೀಪದ ಮೆಳ್ಳೆಕಟ್ಟೆಯಲ್ಲಿ 1936ರ ಮೇ 1ರಂದು ಜನಿಸಿದ ಹೊನ್ನೇನಹಳ್ಳಿ ನಂಜಪ್ಪ ಷಡಾಕ್ಷರಪ್ಪ ಅವರು ಮಾಧ್ಯಮಿಕ ಶಾಲೆಯಲ್ಲಿದ್ದಾಗಲೇ `ಹಳ್ಳಿಯ ಜ್ಯೋತಿ' ಕೈಬರಹ ಪತ್ರಿಕೆಯನ್ನು ಕಾಲೇಜು ವಿದ್ಯಾಭ್ಯಾಸ ಕಾಲದಲ್ಲಿ `ಜನತಾ ಬಂಧು ಎಂಬ ಮಾಸಪತ್ರಿಕೆಯನ್ನೂ ಪ್ರಕಟಿಸಿದವರು. ಅನಂತರ ಬೆಂಗಳೂರಿನ `ನವ ಮೈಸೂರು ವಾರಪತ್ರಿಕೆಯ ಸಹಸಂಪಾದಕರಾಗಿ ದುಡಿದರು, ವಿದ್ಯಾರ್ಥಿದೆಸೆಯಿಂದ ಬರಹವನ್ನು ರೂಢಿಸಿಕೊಂಡಿದ್ದ ಅವರು ಲೇಖನ, ಸಣ್ಣ ಕಥೆಗಳನ್ನು, `ಬದುಕಿನ ಬಂಧನ ಎಂಬ ಧಾರಾವಾಹಿ ಕಾದಂಬರಿಯನ್ನು ಆ ಪತ್ರಿಕೆಯಲ್ಲಿ ಪ್ರಕಟಿಸಿದರು. ಸ್ವಲ್ಪ ಕಾಲ ತುಮಕೂರಿನ `ಬೃಂದಾವನ ವಾರಪತ್ರಿಕೆಯ ಗೌರವ ಸಂಪಾದಕರಾಗಿದ್ದರು.

ಮುಂದೆ ಪ್ರಪಂಚ ಮತ್ತು ವಿಶ್ವವಾಣಿಯ ಸಂಪಾದಕ ಮಂಡಳಿಯ ಬಳಗ ಸೇರಿ ಅನುಭವಗಳಿಸಿದರು. 1966ರಿಂದ 7 ವರ್ಷಗಳ ಕಾಲ ಕರ್ನಾಟಕ ವಾರ್ತಾ ಮತ್ತು ಪ್ರಚಾರ ಇಲಾಖೆಯ `ಜನಪದ ಸಾಪ್ತಾಹಿಕದಲ್ಲಿ ಸೇವೆ ಸಲ್ಲಿಸಿದರು. ಸ್ವಂತ ಪತ್ರಿಕೆ ನಡೆಸುವ ಇಚ್ಛೆ ಪ್ರಬಲವಾಗಿ ಸರ್ಕಾರಿ ಸೇವೆಗೆ ರಾಜೀನಾಮೆಯಿತ್ತು ದಾವಣಗೆರೆಗೆ ಹಿಂದಿರುಗಿ 1975ರಲ್ಲಿ `ಜನತಾವಾಣಿ ಪತ್ರಿಕೆಯನ್ನು ಪ್ರಾರಂಭಿಸಿದರು. ಈ ದೈನಿಕವು ಸ್ಥಳೀಯ ಪತ್ರಿಕೆಯ ಕೊರತೆಯನ್ನು ನೀಗಿಸಿತು. ಅಂದಿನಿಂದ ಇಂದಿನವರೆಗೆ ನಿರಂತರವಾಗಿ ಪ್ರಕಟಗೊಳ್ಳುತ್ತಿರುವ ಜನತಾವಾಣಿ, ಕೇವಲ ಚಿತ್ರದುರ್ಗ ಮತ್ತು ದಾವಣಗೆರೆ ಮಾತ್ರವಲ್ಲದೆ ನೆರೆಹೊರೆ ಜಿಲ್ಲೆಗಳಲ್ಲೂ ಓದುಗರ ವರ್ಗವನ್ನು ಸೃಷ್ಟಿಸಿಕೊಂಡಿದೆ. ಜನಪರವಾದ ಸುದ್ದಿಸಂಗತಿಗಳಿಗೆ ಆದ್ಯತೆ ನೀಡಿದ `ಜನತಾವಾಣಿ ಯಶಸ್ವಿಯಾಯಿತು.

ಸಣ್ಣ ಪತ್ರಿಕೆಯಾದರೂ ಸಮಾಜಕ್ಕೆ ಅಳಿಲು ಸೇವೆ ಮಾಡಬೇಕೆಂದು ಆಶಯ ಹೊತ್ತು ಷಡಾಕ್ಷರಪ್ಪ ಲಾಥೂರ್ ಭೂಕಂಪ ಹಾಗೂ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಪತ್ರಿಕೆಯ ಓದುಗರಿಂದ 15 ಲಕ್ಷ ರೂ ಹಣ ಸಂಗ್ರಹಿಸಿ, ಅರ್ಹರಿಗೆ ತಲುಪಿಸುವಲ್ಲಿ ಪ್ರಾಮಾಣಿಕತೆ ಮೆರೆದಿದ್ದಾರೆ. 

	ಪತ್ರಿಕಾಕಾರ್ಯದ ಜೊತೆಗೆ ಕನ್ನಡಪರ ಚಳವಳಿ, ಪ್ರಗತಿಶೀಲ ಸಾಹಿತ್ಯದ ಬಗ್ಗೆ ಆಸಕ್ತಿ ತಳೆದಿದ್ದ ಷಡಾಕ್ಷರಪ್ಪನವರು ರಾಜ್ಯದ ಸಣ್ಣ ಮತ್ತು ಜಿಲ್ಲಾ ಪತ್ರಿಕಾ ಸಂಪಾದಕರುಗಳ ಸಂಘಕ್ಕೆ ಅವಿರೋಧವಾಗಿ ಆಯ್ಕೆಯಾಗಿದ್ದರು. ಷಡಾಕ್ಷರಪ್ಪ ಕರ್ನಾಟಕ ರಾಜ್ಯ ಮಾಧ್ಯಮ ಅಕಾಡೆಮಿ ಪ್ರಶಸ್ತಿ (1988) ಹಾಗೂ ಪ್ರತಿಷ್ಠಿತ ಟಿಯೆಸ್ಸಾರ್ ಪ್ರಶಸ್ತಿ (2004) ಪುರಸ್ಕøತರು.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ